ಹಾಲು ಕೊಡುವ ಹಸು ಮೇಯುವ ಜಾಗವೂ ಹಾಲಾಹಲ

ಗೋಮಾಳಗಳಲ್ಲಿ ಪ್ಲಾಸ್ಟಿಕ್, ಕೈಗಾರಿಕೆತ್ಯಾಜ್ಯ ವಿಸರ್ಜನೆ ಕಡಿತಕ್ಕೆ ಸೀಮಿತವಾದ ಪ್ಲಾಸ್ಟಿಕ್ ನಿಷೇಧ ಕಾನೂನು

0

ಸಿ.ಎಸ್ ನಾರಾಯಣಸ್ವಾಮಿ

ಹೊಸಕೋಟೆ: ಅಮೃತ ಸಮಾನ ಹಾಲು ಕೊಡುವ ಹಸುಗಳು ಮೇಯುವ ಜಾಗವೂ ವಿಷಯುಕ್ತ ತ್ಯಾಜ್ಯಗಳನ್ನು ವಿಸರ್ಜಿಸುವ ತಾಣಗಳಾಗಿ ಬದಲಾಗುತ್ತಿದ್ದು, ಹಸುಗಳು ಮೇಯುವ ಹುಲ್ಲು ಕಾರ್ಕೋಟಕ ವಿಷವಾಗುತ್ತಿದೆ.

ಗೋಮಾತೆಯ ಮೇವಿಗಾಗಿ ಮೀಸಲಿರಿಸಿದ ಗೋಮಾಳಗಳು ಪ್ರಭಾವಿಗಳ ಒತ್ತುವರಿಯಿಂದ ನಶಿಸುತ್ತಿವೆ. ಅಳಿದುಳಿದ ಗೋಮಾಳಗಳು ತ್ಯಾಜ್ಯ ಸುರಿಯುವ ತಾಣಗಳಾಗುತ್ತಿವೆ.

ಇದು ಹಸುಗಳ ಪ್ರಾಣಕ್ಕೆ ಕಂಟಕಪ್ರಾಯ ವಾಗುತ್ತಿದೆ.

ಹಾಲು ಕೊಡುವ ಹಸುವಿಗೆ ವಿಷಪ್ರಾಶನ: ಕಸವನ್ನು ತಿಂದು ಅಮೃತ ಸಮಾನ ಹಾಲು ಕೊಡುವ ಹಸುವಿಗೆ ದೇಶದಲ್ಲಿ ಪೂಜ್ಯ ಸ್ಥಾನವಿದೆ. ಆದರೆ ಇಂತಹ ಹಸುವಿಗೆ ವಿಷವುಣಿಸುವ ಕೆಲಸ ಸದ್ದಿಲ್ಲದೇ ನಡೆಯುತ್ತಿದೆ ಗೋಮಾಳಗಳಲ್ಲಿ ಪ್ಲಾಸ್ಟಿಕ್ ಹಾಗೂ ಕೈಗಾರಿಕೆ ತ್ಯಾಜ್ಯಗಳನ್ನು ತಂದು ಸುರಿಯಲಾಗುತ್ತಿದೆ.

ರಸ್ತೆ ಬದಿಗಳಲ್ಲೂ ತ್ಯಾಜ್ಯದ ರಾಶಿ: ಅನಧಿಕೃತ ತ್ಯಾಜ್ಯ ವಿಸರ್ಜನೆ ಸಮಸ್ಯೆ ಎಷ್ಟೊಂದು ತೀವ್ರಗೊಂಡಿದೆ ಎಂದರೆ ಹೊಸಕೋಟೆ ತಾಲೂಕಿನ ಗೋಮಾಳಗಳೆಲ್ಲವೂ ಮುಗಿದು ಈಗ ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿಗಳ ಎರಡೂ ಬದಿಗಳಲ್ಲಿ ಕಸವನ್ನು ತಂದು ಸುರಿಯಲಾಗುತ್ತಿದೆ. ಪಾಪದ ಜನರಿಗೆ ಪರಿಸರ ಸ್ವಚ್ಚತೆಯ ಪಾಠ ಹೇಳುವ ಪಂಚಾಯಿತಿಗಳು, ಪ್ರಭಾವಿಗಳು ಎಸಗುತ್ತಿರುವ ಅತ್ಯಾಚಾರಕ್ಕೆ ಮೂಕಸಾಕ್ಷಿಯಾಗಿವೆ.

ಹೊಣೆ ಮರೆತ ಮಾತು: ಈ ಬಗ್ಗೆ ಪ್ರಶ್ನಿಸಿದರೆ ಈ ಜನರಿಗೆ ಹೇಳೋರು ಯಾರು, ಪ್ಲಾಸ್ಟಿಕ್ ಬಳಸಬೇಡಿ ಎಂದು ಹೇಳಿಹೇಳಿ ಸಾಕಾಯಿತು, ಎಲ್ಲೆಂದರಲ್ಲಿ ಕಸ ಎಸೆಯಬೇಡಿ ಎಂದು ಜಾಗೃತಿ ಮೂಡಿಸಿದ್ದರೂ ಆಯಿತು ಆದರೂ ಕೇಳುತ್ತಿದೆ ಎಂದು ಡೈಲಾಗ್ ಹೊಡೆದು ಸುಮ್ಮನಾಗುತ್ತಿದ್ದಾರೆ ಪಂಚಾಯಿತಿ ಅಧಿಕಾರಿಗಳು.
ಪರಿಸರ ನಾಶಕ್ಕೆ ಕೈಗಾರಿಕೆಗಳ ಕೊಡುಗೆ: ಬೇಕಾಬಿಟ್ಟಿ ತ್ಯಾಜ್ಯ ವಿಸರ್ಜನೆಗೆ ಹೊಣೆಗೇಡಿ ಜನರ ಜತೆಗೆ ಕೆಲವು ಕೈಗಾರಿಕೆಗಳು ತಮ್ಮ ಕೊಡುಗೆ ನೀಡುತ್ತಿವೆ. ಕೈಗಾರಿಕೆಗಳು, ಅಂಗಡಿ ಮುಂಗಟ್ಟುಗಳಲ್ಲಿ ಉತ್ಪತ್ತಿಯಾಗುವ ತ್ಯಾಜ್ಯ ಗೋಮಾಳ ಸೇರಿ ಎಲ್ಲೆಂದರಲ್ಲಿ ತಂದು ಸುರಿಯಲಾಗುತ್ತಿದೆ.

ಇದು ಎಲ್ಲೆಡೆ ಹರಡಿ ಇಡೀ ಪರಿಸರವನ್ನು ವಿಷಮಯ ಗೊಳಿಸುತ್ತಿದೆ. ಇಲ್ಲಿ ಬೆಳೆದ ಹುಲ್ಲನ್ನೇ ತಿಂದು ಹಸುಗಳು ನಿತ್ರಾಣಗೊಳ್ಳುತ್ತಿವೆ.

ಹೆದ್ದಾರಿ ಸಮೀಪದ ಮರಗಳ ನೆರಳಲ್ಲಿ ಕುಳಿತು ತಿಂದು ಕುಡಿದು ಮೋಜು ಮಾಡುವ ಜನರು ಊಟ ಮಾಡಿದ ತಟ್ಟೆ, ಕುಡಿದ ಲೋಟಗಳನ್ನು ಅಲ್ಲೇ ಎಸೆದು ಹೋಗುತ್ತಿದ್ದಾರೆ. ಮಲ-ಮೂತ್ರಗಳ ವಿಸರ್ಜನೆಗಂತೂ ಯಾವುದೇ ನಿಯಮವಿಲ್ಲ. ಹೀಗಾಗಿ ರಸ್ತೆಗಳ ಬದಿ ಗಬ್ಬೆದ್ದು
ನಾರುತ್ತಿದೆ.

Get real time updates directly on you device, subscribe now.

Leave A Reply

Your email address will not be published.

Don`t copy text!