‘ಉದ್ಯೋಗ ಅರಸಬೇಡಿ ಪರಿಶ್ರಮದಿಂದ ಸ್ವತಃ ಉದ್ಯಮಿಗಳಾಗಿ ದೇಶಕ್ಕೆ ಕೊಡುಗೆ ನೀಡಿ

ವಿದ್ಯಾರ್ಥಿಗಳಿಗೆ ಸಚಿವ ಮುರುಗೇಶ್ ನಿರಾಣಿ ಕಿವಿಮಾತು

0

ಯಲಹಂಕ: ‘ಉದ್ಯೋಗ ಅರಸಬೇಡಿ, ಪರಿಶ್ರಮದಿಂದ ಸ್ವತಃ ಉದ್ಯಮಿಗಳಾಗಿ ದೇಶಕ್ಕೆ ಏನಾದರೊಂದು ಕೊಡುಗೆ ನೀಡಿ ಕೃತಾರ್ಥರಾಗಿ ಎಂದು ಬೃಹತ್ ಹಾಗೂ ಮಧ್ಯಮ ಕೈಗಾರಿಕೆ ಸಚಿವ ಮುರುಗೇಶ್ ಆರ್. ನಿರಾಣಿ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಯಲಹಂಕದ ನಿಟ್ಟೆ ಮೀನಾಕ್ಷಿ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಆಯೋಜಿಸಿದ್ದ ‘ಸಾಂಸ್ಕೃತಿಕ, ತಾಂತ್ರಿಕ ಹಬ್ಬ – ಅನಾದ್ಯಂತ-2022’ ಅನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕರ್ನಾಟಕ ಸರ್ಕಾರ ಸ್ವಯಂ ಉದ್ಯಮ ಕೈಗೊಳ್ಳುವವರಿಗೆ ಸಬ್ಸಿಡಿ, ತರಬೇತಿ ಸೇರಿದಂತೆ ಇನ್ನಿತರ ಬೆಂಬಲ ನೀಡುತ್ತಿದೆ. ದೇಶದ ಜಿ.ಡಿ.ಪಿಯನ್ನು ವೃದ್ಧಿಸಲು ವಿದ್ಯಾರ್ಥಿಗಳ ಪ್ರತಿಭೆ, ತಾಂತ್ರಿಕ ಪರಿಣಿತಿ ಹಾಗೂ ಉದ್ಯಮಶೀಲತೆ ಅತ್ಯಂತ ಅವಶ್ಯವಿದ್ದು, ನಮ್ಮ ದೇಶದ ಉನ್ನತಿಗಾಗಿ ನಾವು ಏನನ್ನಾದರೂ ಮಾಡಬೇಕು ಎಂಬ ಗುರಿ ನಮ್ಮಲ್ಲಿದ್ದರೆ ಆ ಮನೋನಿಶ್ಚಯವೇ ನಿಮ್ಮನ್ನು ಯಶಸ್ಸಿನ ಹಾದಿಯಲ್ಲಿ ಕರೆದೊಯ್ಯಲಿದೆ, ಜೊತೆಗೆ ದೇಶವನ್ನು ಸಹ ಉನ್ನತ ಮಟ್ಟಕ್ಕೆ ಕೊಂಡೊಯ್ಯಲಿದೆ ಎಂದರು.

‘ಸ್ವಂತ ಉದ್ಯಮ ಸ್ಥಾಪಿಸಲು ನೀವು ಎಲ್ಲಿಯೂ ಹೋಗಬೇಕಿಲ್ಲ. ನಮ್ಮ ಕರ್ನಾಟಕ ರಾಜ್ಯ ಸರ್ಕಾರ ಕೈಗಾರಿಕೆ ಸ್ಥಾಪನೆಗೆ ಅಗತ್ಯ ತರಬೇತಿ, ಸಬ್ಸಿಡಿ ಹಣ, ಸಾಲದ ನೆರವು ಸೇರಿದಂತೆ ವಿವಿಧ ರೀತಿಯಲ್ಲಿ ನೆರವು ನೀಡಲಿದೆ, ಮಾತ್ರವಲ್ಲದೆ ಸುಮಾರು 50 ಸಾವಿರ ಎಕರೆ ಭೂಮಿಯನ್ನು ಕೈಗಾರಿಕೆಗಳ ಸ್ಥಾಪನೆಯ ಸಲುವಾಗಿಯೇ ಸರ್ಕಾರ ಮೀಸಲಿಟ್ಟಿದೆ. ವಿದೇಶಿ ನೇರ ಹೂಡಿಕೆ(ಎಫ್‌ಡಿಐ)ನಲ್ಲಿ ನಮ್ಮ ರಾಜ್ಯ ಭಾರತದಲ್ಲೇ ಅಗ್ರಸ್ಥಾನದಲ್ಲಿದೆ. ದೇಶದ ಒಟ್ಟು ವಿದೇಶಿ ನೇರ ಹೂಡಿಕೆಯಲ್ಲಿ ಶೇಕಡಾ 47ರಷ್ಟು ಪಾಲು ನಮ್ಮ ಕರ್ನಾಟಕ ರಾಜ್ಯದ್ದು ಎಂದು ಹೇಳಲು ಹೆಮ್ಮೆ ಎನಿಸುತ್ತದೆ. ಇತರೆ ಎಲ್ಲ ರಾಜ್ಯಗಳ ಪಾಲು ಕೇವಲ ಉಳಿದ ಶೇಕಡಾ 53ರಷ್ಟು ಮಾತ್ರ. ಅಲ್ಲದೆ ಪರಿಶಿಷ್ಟ ಜಾತಿ, ಬುಡಕಟ್ಟು ಜನಾಂಗಗಳಿಗೆ ಸೇರಿದ ಯುವ ತಂತ್ರಜ್ಞರು ಉದ್ಯಮ ಪ್ರಾರಂಭಿಸುವುದಾದರೆ ಅವರಿಗೆ ಅಗತ್ಯವಿರುವ ಭೂಮಿ ಬೆಲೆಯ ಶೇಕಡಾ 75%ರಷ್ಟನ್ನು ಕರ್ನಾಟಕ ಸರ್ಕಾರ ನೀಡಿ ಪ್ರೋತ್ಸಾಹಿಸುತ್ತಿದೆ. ಈ ಮಟ್ಟಿನ ಪ್ರೋತ್ಸಾಹ ದೇಶದಲ್ಲಿ ನಮ್ಮ ರಾಜ್ಯದಲ್ಲಿ ಮಾತ್ರ ದೊರೆಯುತ್ತಿರುವುದು ಸಂತೋಷದ ವಿಷಯ ಎಂದ ಅವರು ಶೂನ್ಯದಿಂದ ಪ್ರಾರಂಭಿಸಿ ಅಪಾರ ಯಶಸ್ಸನ್ನು ಕಂಡ ಇನ್ಫೋಸಿಸ್‌ನ ಎನ್.ಆರ್.ನಾರಾಯಣಮೂರ್ತಿ, ಒಂದೇ ಒಂದು ಟ್ರಕ್‌ನಿಂದ ಆರಂಭಿಸಿ ಇಂದು ಸಾರಿಗೆ ವಲಯದಲ್ಲಿ 10 ಸಾವಿರಕ್ಕೂ ಹೆಚ್ಚು ವಾಹನಗಳೊಂದಿಗೆ ಅಪಾರ ಯಶಸ್ಸು ಗಳಿಸಿ ಸಾರಿಗೆ ವಲಯದಲ್ಲಿ ಕ್ರಾಂತಿಕಾರಕ ಬೆಳವಣಿಗೆ ಕಂಡಿರುವ ವಿಜಯಸಂಕೇಶ್ವರ್, ಸ್ವತಃ ಅವರದ್ದೇ ನಿರಾಣಿ ಸಮೂಹ ಉದ್ಯಮದ ಸ್ಥಾಪನೆ, ಅಭಿವೃದ್ಧಿ, ಯಶಸ್ಸುಗಳ ಕಠಿಣ ಹಾದಿಯ ಯಶೋಗಾಥೆಯನ್ನು ಈ ಸಂದರ್ಭದಲ್ಲಿ ಸ್ಮರಿಸಿದರು.

ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಾಧಿಪತಿ ಪ್ರೊ. ಎನ್.ಆರ್. ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ‘ಕೃಷಿ ಪ್ರಧಾನ ದೇಶವಾದ ಭಾರತದಲ್ಲಿ ಕೃಷಿ ಉತ್ಪನ್ನಗಳನ್ನಾಧರಿಸಿದ ಕೈಗಾರಿಕೆಗಳು ಅಧಿಕ ಪ್ರಮಾಣದಲ್ಲಿ ಸ್ಥಾಪನೆಯಾಗಬೇಕು ಹಾಗಾದಾಗ ರೈತನ ಬದುಕು ಹಸನಾಗುತ್ತದೆ, ದೇಶವೂ ಅಭಿವೃದ್ಧಿ ಪಥದಲ್ಲಿ ಅತ್ಯಂತ ವೇಗದಲ್ಲಿ ಸಾಗಲಿದೆ’, ಎಂದರು.
ಮೂರು ದಿನಗಳ ಕಾಲ ನಡೆಯಲಿರುವ ಈ ಸಾಂಸ್ಕೃತಿಕ, ತಾಂತ್ರಿಕ ಉತ್ಸವದಲ್ಲಿ ದೇಶದ ವಿವಿಧ ರಾಜ್ಯಗಳಿಂದ ಯುವ ತಂತ್ರಜ್ಞರು, ತಂತ್ರಜ್ಞಾನದ ವಿದ್ಯಾರ್ಥಿಗಳು ಸೇರಿದಂತೆ 10 ಸಾವಿರಕ್ಕೂ ಹೆಚ್ಚು ಜನ ಪಾಲ್ಗೊಳ್ಳಲಿದ್ದು, ಪ್ರಾತ್ಯಕ್ಷಿಕೆಗಳ ಮುಖಾಂತರ ತಮ್ಮ ಪ್ರತಿಭೆ ಮತ್ತು ಆವಿಷ್ಕಾರಗಳನ್ನು ಸಾದರಪಡಿಸಲಿದ್ದಾರೆ. ಪ್ರಮುಖ ಗಾಯಕರು, ನೃತ್ಯಪಟುಗಳು ಸಾಂಕೃತಿಕ ಉತ್ಸವದಲ್ಲಿ ನೆರೆದಿರುವ ಜನರನ್ನು ರಂಜಿಸಲಿದ್ದಾರೆ.

ಕಾರ್ಯಕ್ರಮದಲ್ಲಿ ಬಹುಭಾಷಾ ಚಿತ್ರನಟಿ ಶಿಲ್ಪ ಮಂಜುನಾಥ್, ನಿಟ್ಟೆ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತಾಧಿಕಾರಿ ರೋಹಿತ್ ಪೂಂಜ, ನಿಟ್ಟೆ ಮೀನಾಕ್ಷಿ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ಎಚ್.ಸಿ. ನಾಗರಾಜ್, ಶೈಕ್ಷಣಿಕ ವಿಭಾಗದ ಮುಖ್ಯಸ್ಥ ಡಾ.ವಿ. ಶ್ರೀಧರ್, ಶಿಕ್ಷಕ ಸಂಯೋಜಕರಾದ ಡಾ.ಸುಧೀರ್ ರೆಡ್ಡಿ, ಡಾ.ಎನ್.ನಳಿನಿ ಸೇರಿದಂತೆ ಇನ್ನಿತರರಿದ್ದರು.

Get real time updates directly on you device, subscribe now.

Leave A Reply

Your email address will not be published.

Don`t copy text!