ಉತ್ತಮ ಇಳುವರಿಯಲ್ಲಿದ್ದ ರೈತರಿಗೆ ಮುಳುವಾದ ಮಳೆ

0

ದೊಡ್ಡಬಳ್ಳಾಪುರ: ಅಸಾನಿ‌ ಚಂಡಮಾರುತ‌ದ ಪರಿಣಾಮ ಕಳೆದ ಮೂರ್ನಾಲ್ಕು‌ ದಿನಗಳಿಂದ‌ ಸುರಿಯುತ್ತಿರುವ ಬಿರುಗಾಳಿ ಸಹಿತ ಮಳೆಗೆ ರೈತರ ಬೆಳೆಗಳು ಜಲಾವೃತಗೊಂಡು, ನೆಲಕಚ್ಚಿವೆ.

ಉತ್ತಮ ಇಳುವರಿಯೊಂದಿಗೆ ಲಾಭದ ನಿರೀಕ್ಷೆಯಲ್ಲಿ ರೈತರಿಗೆ ಮಳೆಯೇ ಮುಳುವಾಗಿ ಪರಿಣಮಿಸಿದೆ. ತಾಲೂಕಿನ ತೂಬಗೆರೆ ಹೋಬಳಿ ವ್ಯಾಪ್ತಿಯ ಬಚ್ಚಹಳ್ಳಿ ಗ್ರಾಮದಲ್ಲಿ ಉತ್ತಮ ಫಸಲಿನೊಂದಿಗೆ ನಳನಳಿಸುತ್ತಿದ್ದ ಹುರುಳಿಕಾಯಿ(ಬೀನ್ಸ್) ಹಾಗೂ ಸೌತೆಕಾಯಿ‌ ಬೆಳೆ‌ಗಳು ಮಳೆಗಾಳಿಗೆ ನೆಲಕಚ್ಚಿವೆ.

ಗ್ರಾಮದ ಗಂಗರಾಜು‌(ಗಂಗಣ್ಣ) ಅವರು ಎರಡು ಎಕರೆಯಲ್ಲಿ ಬೆಳೆದಿದ್ದ ಹುರುಳಿಕಾಯಿ ಬೆಳೆ ಒಂದೇ ಮಳೆಗೆ‌ ನೆಲಕಚ್ಚಿ, ಅವರನ್ನು ಸಾಲದ ಸುಳಿಗೆ ಸಿಲುಕಿಸಿದೆ. ಕೊಯ್ಲಿಗೆ ಬಂದಿದ್ದ ಬೆಳೆ ರಾತ್ರಿ ಬೆಳಗಾಗುವಷ್ಟರಲ್ಲಿ ಹಾಳಾಗಿರುವುದು ಊಹಿಸಿಕೊಳ್ಳಲು ಸಾಧ್ಯವಾಗದಂತಿದೆ.

ಎರಡೂವರೆ‌ ಲಕ್ಷ ರೂಪಾಯಿ‌ ಖರ್ಚು‌ ಮಾಡಿ ಹುರುಳಿ ಬೆಳೆದಿದ್ದೆ. ಕಳೆದ‌ ಮಂಗಳವಾರ ಹಾಗೂ ಬುಧವಾರ ಸುರಿದ ಬಿರುಗಾಳಿ‌ ಮಳೆಗೆ‌ ಇಡೀ‌ ಬೆಳೆ ನೆಲಕಚ್ಚಿ, ಹಾಳಾಗಿದೆ. ಕಡ್ಡಿ, ದಾರ, ಆಳುಗಳು, ಗೊಬ್ಬರ ಯತೇಚ್ಛವಾಗಿ ಹಾಕಲಾಗಿತ್ತು. ಮಾರುಕಟ್ಟೆಯಲ್ಲಿ ಸದ್ಯ ಹುರುಳಿಕಾಯಿ‌ ಕೆ.ಜಿ.86 ರಿಂದ 90ಕ್ಕೆ‌‌ ಮಾರಾಟವಾಗುತ್ತಿದೆ.‌ ಇಂತ ಸಮಯದಲ್ಲೇ ಬೆಳೆ ಹಾಳಾಗಿದೆ. ತೋಟದ ಕಡೆ ಬರುವುದಕ್ಕೂ‌ ಮನಸ್ಸಾಗುತ್ತಿಲ್ಲ. ಸಾಲ ಮಾಡಿ ಬೆಳೆದಿರುವ ಬೆಳೆ ಕೈಗೆ ಸಿಗದಂತಾಗಿದ್ದು, ಸಾಲಗಾರರಿಗೆ ಮುಖ ತೋರಿಸುವುದು ಹೇಗೆ‌ ಎಂಬುದೇ ತಿಳಿಯುತ್ತಿಲ್ಲ‌ ಎಂದು ದುಃಖ ತೋಡಿಕೊಂಡರು.

ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಇತ್ತ ಗಮನ ಹರಿಸಬೇಕು ಎಂದು ಮನವಿ ಮಾಡಿಕೊಂಡರು.

ಸೌತೆಕಾಯಿ ಬೆಳೆ‌ ಸಂಪೂರ್ಣ ಜಲಾವೃತ ಇದೇ ಗ್ರಾಮದ‌‌ ನರಸಿಂಹ‌ಮೂರ್ತಿ ಅವರಿಗೆ ಸೇರಿದ ಸೌತೆಕಾಯಿ ಬೆಳೆ ಸಂಪೂರ್ಣ ಮಳೆ‌ ನೀರಿನಿಂದ ಜಲಾವೃತವಾಗಿದೆ. ಸೌತೆಕಾಯಿ ಬಳ್ಳಿ ಹೂವು, ಪಿಂಧೆ ಬಿಟ್ಟಿತ್ತು. ಇಂತಹ ಸಮಯದಲ್ಲಿ ಸುರಿದ ಧಾರಾಕಾರ ಮಳೆ ಉತ್ತಮ ಇಳುವರಿಯ ಆಸೆಯನ್ನೇ ಕಸಿದಿದೆ. ಜಲಾವೃತವಾಗಿರುವ ನೀರು ಬೇರೆಡೆ ಹೋಗಲು ಸ್ಥಳಾವಕಾಶವಿಲ್ಲ. ಅಧಿಕ ತೇವಾಂಶದಿಂದ ಇಡೀ ಬೆಳೆ ಹಾಳಾಗಲಿದೆ ಎಂದು‌ ಅಳಲು ತೋಡಿಕೊಂಡರು. ಇದೇ ರೀತಿ ಟೊಮೆಟೊ ಕೂಡ ಬಿರುಗಾಳಿಗೆ ನೆಲಕಚ್ಚಿತ್ತು. ಆದರೆ, ಅದನ್ನು ಸರಿಪಡಿಸಿಕೊಂಡಿದ್ದೇವೆ. ಆದರೂ ಫಸಲು ಕಚ್ಚುವುದು ಅನುಮಾನ ಎಂದು ಹೇಳಿದರು.

Get real time updates directly on you device, subscribe now.

Leave A Reply

Your email address will not be published.

Don`t copy text!