ದೊಡ್ಡಬಳ್ಳಾಪುರ: ಪ್ರತೀ ಗ್ರಾಮ ಮಟ್ಟದಲ್ಲೂ ಹಾಲು ಉತ್ಪಾದಕ ಸಂಘಗಳಿಗೆ ಸ್ವಂತ ಕಟ್ಟಡ ಹೊಂದುವಂತೆ ಮಾಡಲು ಒಕ್ಕೂಟದಿಂದ ಧನ ಸಹಾಯ ನೀಡಲಾಗುತ್ತಿದೆ. ಹಾಲು ಉತ್ಪಾದಕ ರೈತರು ತಮ್ಮ ದೈನಂದಿನ ಕೆಲಸ ಕಾರ್ಯಗಳಲ್ಲಿ ನಿರತರಾಗಿ ಜಮೀನಿನಲ್ಲಿ ಹಾವು ಕಡಿತಕ್ಕೊಳಗಾಗಿ ಮರಣ ಹೊಂದಿದರೆ ರೂ. 2 ಲಕ್ಷ ಪರಿಹಾರ ಧನ ನೀಡಲಾಗುತ್ತಿದೆ ಎಂದು ಕೆಎಂಎಫ್ ನಿರ್ದೇಶಕ ಬಿಸಿ ಆನಂದ್ ತಿಳಿಸಿದರು.
ನಗರದ ಬಮೂಲ್ ಶಿಬಿರ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಎಂಪಿಸಿಎಸ್ ನಲ್ಲಿ ಹಾಲು ಉತ್ಪಾದಕರ ರೈತರು 69 ವರ್ಷ ಮೇಲ್ಪಟ್ಟವರು ಮರಣ ಹೊಂದಿದವರ ಕುಟುಂಬಕ್ಕೆ ಪರಿಹಾರ ಧನ ವಿತರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ತಾಲೂಕಿನಲ್ಲಿ ಈವರೆಗೆ ೬೯ ವರ್ಷ ಮೇಲ್ಪಟ್ಟಿರುವ ಹಾಲು ಉತ್ಪಾದಕರು ೧೩ ಮಂದಿ ನಿಧನ ಹೊಂದಿದ್ದಾರೆ. ಅವರ ಕುಟುಂಬ ಸದಸ್ಯರಿಗೆ ಬಮೂಲ್ ವತಿಯಿಂದ ತಲಾ 25 ಸಾವಿರ ರೂ.ಗಳ ಪರಿಹಾರ ಧನವನ್ನು ವಿತರಿಸಲಾಗುತ್ತಿದೆ. ಅಲ್ಲದೆ ಕೋವಿಡ್ ಸಂದರ್ಭದಲ್ಲಿ ಮೃತರಾದ ಹಾಲು ಉತ್ಪಾದಕರು ಇನ್ನೂ ಯಾರದರೂ ಬಮೂಲ್ ಗೆ ದಾಖಲೆ ಸಲ್ಲಿಸದಿದ್ದಾರೆ ಶೀಘ್ರವಾಗಿ ಬಮೂಲ್ ಶಿಬಿರ ಕಚೇರಿಯಲ್ಲಿ ಮಾಹಿತಿ ನೀಡಿದರೆ ತಲಾ ೫೦ ಸಾವಿರ ಪರಿಹಾರ ಧನ ವಿತರಣೆ ಮಾಡಲಾಗುತ್ತದೆ ಎಂದರು.
ಶಿಬಿರ ವ್ಯವಸ್ಥಾಪಕ ಎಲ್ ಬಿ ನಾಗರಾಜು ಮಾತನಾಡಿ ರೈತರಿಗಾಗಿ ಕೆಎಂಎಫ್ ಹಾಗೂ ಬಮೂಲ್ ಹಲವು ಯೋಜನೆಗಳನ್ನು ರೂಪಿಸಿವೆ. ರೈತರು ಯಾವುದೇ ಸಮಸ್ಯೆ ಎದುರಿಸುತ್ತಿದ್ದರೂ ನಮ್ಮ ಗಮನಕ್ಕೆ ತಂದರೆ ಶೀಘ್ರವಾಗಿ ಪರಿಹರಿಸಲಾಗುವುದು ಎಂದರು.
ಕಾರ್ಯಕ್ರಮದಲ್ಲಿ ದೇವನಹಳ್ಳಿ ಬಮೂಲ್ ನಿರ್ದೇಶಕ ಲೋಕೇಶ್, ವಿಸ್ತಾರಣಾಧಿಕಾರಿಗಳಾದ ಅಶ್ವಥ್, ಪ್ರಕಾಶ್, ನಾಗೇಶ್, ಶಿವಪುರ ವಿಎಸ್ಎಸ್ಎನ್ ಮಾಜಿ ಅಧ್ಯಕ್ಷ ನಾಗರಾಜು, ಕುಮಾರ್ ಮತ್ತಿತರರು ಇದ್ದರು.