ಪದವಿ ಪ್ರಧಾನ ಸಮಾರಂಭ

0

ದೊಡ್ಡಬಳ್ಳಾಪುರ: ಪೋಷಕರು ಮಕ್ಕಳಲ್ಲಿ ಆಸ್ತಿ, ಆಭರಣ, ಅಂತಸ್ತು ನಿರೀಕ್ಷಿಸುವುದಕ್ಕಿಂತ ಶಿಕ್ಷಣವನ್ನು ನೀಡಿದರೆ ನಿಮ್ಮ ಮಕ್ಕಳ ಮೂಲಕ ದೇಶಕ್ಕೆ ಜ್ಞಾನ ಸಂಪತ್ತನ್ನು ನೀಡಿದಂತಾಗುತ್ತದೆ ಎಂದು ಶಾಸಕ ಟಿ.ವೆಂಕಟರಮಣಯ್ಯ ತಿಳಿಸಿದರು.
ಅವರು ಬೋಧಿವೃಕ್ಷ ಎಜುಕೇಷನ್ ಅಂಡ್ ಚಾರಿಟಬಲ್ ಟ್ರಸ್ಸಿನ ಮಾಳವ ಸಂಜೆ ಪದವಿ ಕಾಲೇಜಿನ ಪದವಿ ಮುಗಿಸಿದ ವಿದ್ಯಾರ್ಥಿಗಳಿಗೆ ಅಂಬೇಡ್ಕರ್ ಭವನದಲ್ಲಿ ಏರ್ಪಡಿಸಿದ್ದ ‘ಬೆಳಕು’-೨೦೨೦-೨೧ರ ಪದವಿ ಪ್ರಧಾನ ಪುರಸ್ಕಾರ ಸಮಾರಂಭದ ಉದ್ಘಾಟನೆ ಮಾಡಿ ಮಾತನಾಡಿದರು.

ನಾನು ಕೂಡ ಕೆಲಸ ಮಾಡಿಕೊಂಡು ಸಂಜೆ ಕಾಲೇಜಿನಲ್ಲಿ ಓದಲು ಮುಂದಾಗಿದ್ದೆ. ಆದರೆ ಕೆಲಸದ ಒತ್ತಡದಿಂದ ಪದವಿ ಪಡೆಯಲು ಆಗಲಿಲ್ಲ. ನನ್ನ ಅಧಿಕಾರ ಅವಧಿಯಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಅಭಿವೃದ್ಧಿಗೆ ಪೂರಕವಾಗಿ ಸ್ಪಂದಿಸಿದ್ದೇನೆ. ಮಹಿಳಾ ಪ್ರಥಮ ದರ್ಜೆ ಕಾಲೇಜು ಸ್ಥಾಪನೆ ಮಾಡಲಾಗಿದೆ. ಹೊಸ ಸರ್ಕಾರಿ ಐಟಿಐ ಕಾಲೇಜು ಉದ್ಘಾಟನೆಗೊಳಲ್ಲಿದೆ. ವಸತಿ ಶಾಲೆಗಳನ್ನು ಪ್ರಾರಂಭಿಸಲಾಗಿದೆ. ಹಿಂದುಳಿದವರು ಮತ್ತು ದಲಿತರು, ಬಡವರು ಈ ಶಾಲೆಗಳಲ್ಲಿ ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸಲು ಅನುಕೂಲಕರವಾಗಿದೆ. ಇದರಿಂದ ಶೈಕ್ಷಣಿಕವಾಗಿ ದುಬಾರಿ ವೆಚ್ಚ ಕೊಟ್ಟು ಓದಿಸುವುದನ್ನು ತಪ್ಪಿಸಲಾಗಿದೆ. ಮುಂದೆ ದೊಡ್ಡಬಳ್ಳಾಪುರ ತಾಲ್ಲೂಕಿನಲ್ಲಿ ಸರ್ಕಾರಿ ಮೆಡಿಕಲ್ ಕಾಲೇಜು ಮತ್ತು ನರಸಿಂಗ್ ಕಾಲೇಜು ತರುವ ಗುರಿ ಇದೆ ಎಂದು ತಿಳಿಸಿದರು.

ಟ್ರಸ್ಟಿನ ಕಾರ್ಯದರ್ಶಿ ಜಿ.ಲಕ್ಷ್ಮಿಪತಿ ಪ್ರಾಸ್ತಾವಿಕವಾಗಿ ಮಾತನಾಡಿ, ಕಳೆದ ೧೦ ವರ್ಷಗಳ ಹಿಂದೆ ಸಮಾನ ಮನಸ್ಕರು ಸೇರಿ ಟ್ರಸ್ಟಿನ ವತಿಯಿಂದ ಉದ್ಯೋಗಕ್ಕೆ ಹೋಗುವವರಿಗೆ ಮಾಳವ ಸಂಜೆ ಕಾಲೇಜು ಪ್ರಾರಂಭ ಮಾಡಿದೆವು. ಉದ್ಯೋಗದಲ್ಲಿದ್ದು ರೆಗ್ಯುಲರ್ ಪದವಿ ಪಡೆಯಲು ಸಾಧ್ಯವಾಯಿತು. ಇಂದು ಟ್ರಸ್ಟಿನ ವತಿಯಿಂದ ಪದವಿ ಪ್ರಧಾನ ಸಮಾರಂಭ ಏರ್ಪಡಿಸಿದ್ದೇವೆ. ಈ ನಮ್ಮ ಸಂಜೆ ಕಾಲೇಜಿನ ಬಿ.ಎಸ್. ನಂದೀಶ್ ಎಂಬ ವಿದ್ಯಾರ್ಥಿ ಬೆಂಗಳೂರು ಉತ್ತರ ವಿಶ್ವವಿದ್ಯಾಲಯಕ್ಕೆ ಸಂಯೋಜನೆಗೊಂಡಿರುವ ೨೭೨ ಕಾಲೇಜುಗಳಲ್ಲಿ ಕಲಾವಿಭಾಗದಿಂದ ಪ್ರಥಮ ರ‍್ಯಾಂಕ್ ಪಡೆದು ಉತ್ತೀರ್ಣನಾಗಿ ನಮ್ಮ ಸಂಜೆ ಕಾಲೇಜಿಗೆ ಕೀರ್ತಿ ತಂದಿದ್ದಾನೆ. ಈ ಸಾಧಕ ಎಲ್ಲಾ ವಿದ್ಯಾರ್ಥಿಗಳಿಗೆ ಮಾದರಿಯಾಗಿದ್ದಾನೆ. ಶಿಕ್ಷಣ ಪ್ರತಿಯೊಬ್ಬರಿಗೂ ಸಿಗಬೇಕೆಂಬುದೇ ನಮ್ಮ ಉದ್ದೇಶವಾಗಿದೆ ಎಂದು ತಿಳಿಸಿದರು.

ಅತಿಥಿಯಾಗಿ ಆಗಮಿಸಿದ್ದ ಪ್ರಾಧ್ಯಾಪಕ ಡಾ.ಸದಾಶಿವ ರಾಮಚಂದ್ರಗೌಡ ಮಾತನಾಡಿ, ಸಮಾಜದ ತಿಳಿವಳಿಕೆ ಮತ್ತು ಜ್ಞಾನದ ಗಳಿಕೆ ಇದ್ದವರು ಮಾತ್ರ ಉನ್ನತ ಸ್ಥಾನಕ್ಕೆ ಹೋಗಲು ಸಾಧ್ಯ. ಉನ್ನತ ವಿದ್ಯಾಭಾಸ ಮಾಡಿದರೆ ಸಾಲದು ಸಮಾಜದ ಆಗು ಹೋಗುಗಳಿಗೆ ಸ್ಪಂದಿಸಬೇಕು. ಆಗ ಮಾತ್ರ ವಿದ್ಯಾವಂತರಾಗಿ ಸಾರ್ಥಕವಾಗುತ್ತದೆ ಎಂದರು.

ಮಾಳವ ಸಂಜೆ ಕಾಲೇಜಿನಲ್ಲಿ ಓದಿ ಪ್ರಥಮ ರ‍್ಯಾಂಕ್ ಪಡೆದಿರುವ ಬಿ.ಎಸ್.ನಂದೀಶ್ ಮಾತನಾಡಿ, ನನಗೆ ಓದಬೇಕೆಂಬ ಆಸೆ ಇದ್ದರೂ ಕೆಲಸ ಸಿಕ್ಕಿದ್ದರಿಂದ ಪದವಿ ಪಡೆಯಲು ಸಾಧ್ಯವಾಗಿರಲಿಲ್ಲ. ಕೆಲಸ ಮಾಡಿಕೊಂಡು ಓದಲು ಮಾಳವ ಸಂಜೆ ಕಾಲೇಜಿನಲ್ಲಿ ಸೇರಿಕೊಂಡೆ. ನನಗೆ ಪ್ರಥಮ ರ‍್ಯಾಂಕ್ ಬಂದದ್ದು ಸಂತಸ ತಂದಿದೆ. ಉತ್ತಮ ಸಾಧನೆಗೆ ಪಡೆಯಲು ಶಿಸ್ತು ಮತ್ತು ಶ್ರದ್ದೆ ಬೇಕಾಗುತ್ತದೆ. ಪಠ್ಯಕ್ಕೆ ಪೂರಕವಾದ ವಿಷಯಗಳನ್ನು ತಿಳಿದುಕೊಂಡು ಚೆನ್ನಾಗಿ ಅಭ್ಯಾಸ ಮಾಡಿದೆ. ಶಿಕ್ಷಕರು ಮತ್ತು ಇತರೆ ಸಂಪನ್ಮೂಲ ವ್ಯಕ್ತಿಗಳು ನನಗೆ ತುಂಬಾ ನೆರವು ನೀಡಿದರು. ಅವರಿಂದ ಪ್ರಥಮ ರ‍್ಯಾಂಕ್ ಪಡೆಯಲು ಸಾಧ್ಯವಾಯಿತು ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಅಧ್ಯಕ್ಷ ಪ್ರೊ.ಚಂದ್ರಪ್ಪ ಮಾತನಾಡಿ, ವಿದ್ಯೆ ಸಾಧಕನ ಸ್ವತ್ತೇ ಹೊರತು ಸೋಮಾರಿಯ ಸ್ವತ್ತಲ್ಲ. ವಿದ್ಯಾವಂತರು ಸಮಾಜ ಘಾತಕರಾಗಿ ಬೆಳೆಯಬಾರದು. ಸಮಾಜ ನಮಗೇನು ಕೊಟ್ಟಿದೆ ಎನ್ನುವುದಕ್ಕಿಂತ ಸಮಾಜಕ್ಕೆ ನಾವೇನು ಕೊಟ್ಟಿದ್ದೇವೆ ಎಂಬುದನ್ನು ತಿಳಿದು ಬದುಕುವುದೇ ನಿಜವಾದ ಪದವಿ. ನಮ್ಮ ಸಂಜೆ ಕಾಲೇಜಿನಲ್ಲಿ ಓದಿದ ವಿದ್ಯಾರ್ಥಿಗಳು ಹಲವಾರು ಸರ್ಕಾರಿ ಖಾಸಗಿ ಕ್ಷೇತ್ರಗಳಲ್ಲಿ ಉದ್ಯೋಗಿಗಳಾಗಿದ್ದಾರೆ. ಮುಂದಿನ ವರ್ಷದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ನಮ್ಮ ಸಂಜೆ ಕಾಲೇಜಿಗೆ ಸೇರುವಂತೆ ಇಲ್ಲಿ ಕೆಲಸ ಮಾಡಿದ ಓದಿದ ಎಲ್ಲರೂ ಪ್ರೇರೇಪಿಸಬೇಕೆಂದು ತಿಳಿಸಿದರು.

ಕಾಲೇಜಿನಲ್ಲಿ ಪದವಿ ಪೂರೈಸಿದ ಪದವಿ ವಿದ್ಯಾರ್ಥಿಗಳಿಗೆ ಪದವಿ ಪ್ರಧಾನ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಟ್ರಸ್ಟಿಗಳಾದ ವಿ.ಜಿ.ಬಾಲಕೃಷ್ಣ, ಡಿ.ತಿಮ್ಮರಾಯಪ್ಪ, ಪದ್ಮ ರಾಮಕೃಷ್ಣ, ಎಂ.ರಾಜೇಶ್ ಕಾಲೇಜಿನ ಪ್ರಾಂಶುಪಾಲ ಮಂಜುಳಾ, ಮಾಜಿ ಪ್ರಾಂಶುಪಾಲರಾದ ಬಿ.ಎನ್.ನರಸಿಂಹಮೂರ್ತಿ, ಈಶ್ವರಾಚಾರ್, ಎಪಿಎಂಸಿ ಅಧ್ಯಕ್ಷ ಸಿದ್ದರಾಮಯ್ಯ, ಮಾಜಿ ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಡಿ.ಸಿ.ಶಶಿಧರ್ ಇದ್ದರು.

Get real time updates directly on you device, subscribe now.

Leave A Reply

Your email address will not be published.

Don`t copy text!