ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತರಿಗೆ ವಿಶೇಷ ಸೌಲಭ್ಯ ನೀಡಲಿ: ಶಾಸಕ ವಿ.ಮುನಿಯಪ್ಪ ಆಗ್ರಹ

0

ಚಿಕ್ಕಬಳ್ಳಾಪುರ: ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಎಲ್ಲರಿಗೂ ಆಹಾರ ಧಾನ್ಯವನ್ನು ಉತ್ಪಾದನೆ ಮಾಡಿಕೊಡುವ ರೈತರನ್ನು ಗೌರವಿಸಿ ಅವರಿಗೆ ಎಲ್ಲಾ ರೀತಿಯ ಸೌಲಭ್ಯಗಳನ್ನು ಒದಗಿಸಲು ಸರ್ಕಾರಗಳು ಕ್ರಮ ಕೈಗೊಳ್ಳಬೇಕೆಂದು ಶಾಸಕ ವಿ.ಮುನಿಯಪ್ಪ ಒತ್ತಾಯಿಸಿದರು.

ನಗರದ ಪ್ರವಾಸಿ ಮಂದಿರದಲ್ಲಿ ಪರಿಶಿಷ್ಟ ಪಂಗಡದ ರೈತರಿಗೆ ವಾಲ್ಮೀಕಿ ಅಭಿವೃದ್ದಿ ನಿಗಮದಿಂದ ಮೋಟರ್ ಪಂಪ್ ವಿತರಿಸಿ ಮಾತನಾಡಿದ ಅವರು ರೈತರು ಮಳೆ ಗಾಳಿ ಬಿಸಿಲು ಎಂದು ಲೆಕ್ಕಿಸದೆ ಹೂ ಹಣ್ಣು ತರಕಾರಿ ಮತ್ತು ಆಹಾರ ಸಾಮಾಗ್ರಿಗಳನ್ನು ಉತ್ಪಾದನೆ ಮಾಡಿ ಜನರ ಪಾಲಿಗೆ ಅನ್ನದಾತವಾಗಿದ್ದಾರೆ ಸರ್ಕಾರಗಳು ಸಹ ರೈತರಿಗೆ ಹೆಚ್ಚಿನ ಪ್ರಮಾಣದಲ್ಲಿ ರಿಯಾಯಿತಿ ಮತ್ತು ಸೌಲಭ್ಯಗಳನ್ನು ನೀಡಿ ಸಹಕರಿಸಬೇಕೆಂದು ಮನವಿ ಮಾಡಿದರು.

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಅಂತರ್ಜಲಮಟ್ಟ ಕುಸಿದು ವಿಷಪೂರಿತ ನೀರು ಸೇವಿಸಿ ಹಲವರು ದಂತಕ್ಷಯ ಸಹಿತ ಅನೇಕ ರೋಗಗಳಿಂದ ನರಳುತ್ತಿದ್ದಾರೆ ಕಳೆದ ಸಾಲಿನಲ್ಲಿ ಮತ್ತು ಕಳೆದ ಎರಡು ಮೂರು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಕೆರೆಗಳಿಗೆ ಅಲ್ಪ ಪ್ರಮಾಣದಲ್ಲಿ ನೀರು ಬಂದಿದೆ ಆದರೆ ಮಳೆಯ ಆರ್ಭಟಕ್ಕೆ ರೈತರು ಬೆಳೆದಿದ್ದ ದ್ರಾಕ್ಷಿ, ಹಿಪ್ಪುನೇರಳೆ ,ಮಾವಿನಕಾಯಿ ಇನ್ನಿತರೆ ಬೆಳೆಗಳು ನಾಶವಾಗಿ ಸಂಕಷ್ಟದಲ್ಲಿ ಸಿಲುಕಿದ್ದಾರೆ ಜಿಲ್ಲಾಡಳಿತ ಮತ್ತು ಸರ್ಕಾರ ಕೂಡಲೇ ರೈತರಿಗೆ ಆಗಿರುವ ನಷ್ಟವನ್ನು ಭರಿಸುವ ಕೆಲಸವನ್ನು ಕೂಡಲೇ ಮಾಡಬೇಕೆಂದು ಆಗ್ರಹಿಸಿದರು.

ರಾಜ್ಯದಲ್ಲಿ ಮುಂದಿನ ಎರಡು ಮೂರು ದಿನಗಳ ಕಾಲ ವ್ಯಾಪಕವಾಗಿ ಮಳೆ ಬೀಳುವ ಮುನ್ಸೂಚನೆಯನ್ನು ಹವಮಾನ ಇಲಾಖೆ ನೀಡಿದ್ದು ರೈತರು ಮತ್ತು ಜನಸಾಮಾನ್ಯರು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು ಅಧಿಕಾರಿಗಳು ಮಳೆಯ ನೀರು ಸರಾಗವಾಗಿ ಹರಿಯಲು ತೊಡಕಾಗಿರುವ ಪ್ರದೇಶಗಳನ್ನು ಗುರುತಿಸಿ ಚರಂಡಿಗಳಲ್ಲಿನ ತ್ಯಾಜ್ಯವನ್ನು ವಿಲೇವಾರಿ ಮಾಡಲು ಕ್ರಮ ಕೈಗೊಳ್ಳಬೇಕೆಂದು ಸೂಚಿಸಿದರು.

ರೈತರಿಗೆ ನೀಡುತ್ತಿರುವ ಮೋಟರ್ ಪಂಪ್‍ಗಳು ಗುಣಮಟ್ಟವಾಗಿರಬೇಕು ಒಂದು ವೇಳೆ ರೈತರಿಂದ ಕಳಪೆ ಎಂದು ದೂರು ಬಂದಿದ್ದ ಪಕ್ಷದಲ್ಲಿ ಸಂಬಂಧಿಸಿದ ಇಲಾಖಾಧಿಕಾರಿಗಳ ಮೇಲೆ ಕ್ರಮ ಜರುಗಿಸಲು ಹಿರಿಯ ಅಧಿಕಾರಿಗಳಿಗೆ ವರದಿ ಸಲ್ಲಿಸುವುದಾಗಿ ಎಚ್ಚರಿಕೆ ನೀಡಿದ ಶಾಸಕರು ರೈತರು ಸಹ ಸರ್ಕಾರದಿಂದ ದೊರೆಯುವ ಸೌಲಭ್ಯವನ್ನು ಸದುಪಯೋಗ ಮಾಡಿಕೊಂಡು ಕೃಷಿ ಕ್ಷೇತ್ರದಲ್ಲಿ ಮತ್ತಷ್ಟು ಸಾಧನೆ ಮಾಡಬೇಕೆಂದು ಸಲಹೆ ನೀಡಿದರು.

ಈ ಸಂದರ್ಭದಲ್ಲಿ ಜಿಪಂ ಮಾಜಿ ಸ್ಥಾಯಿ ಸಮಿತಿಯ ಅಧ್ಯಕ್ಷ ಎನ್.ಮುನಿಯಪ್ಪ, ವಾಲ್ಮೀಕಿ ಅಭಿವೃದ್ದಿ ನಿಗಮದ ಜಿಲ್ಲಾ ವ್ಯವಸ್ಥಾಪಕ ಕೆ.ಸಿ.ಜಯರಾಮಯ್ಯ,ಕೊತ್ತನೂರು ಪಂಚಾಕ್ಷರಿ ರೆಡ್ಡಿ, ನಗರಸಭಾ ಸದಸ್ಯರಾದ ಅನಿಲ್‍ಕುಮಾರ್, ಕೃಷ್ಣಮೂರ್ತಿ, ವಾಲ್ಮೀಕಿ ಸಮಾಜದ ಮುಖಂಡರಾದ ಮೇಲೂರು ಅಣ್ಯಪ್ಪ, ಮುತ್ತೂರು ವೆಂಕಟೇಶ್, ನಗರಸಭೆಯ ಮಾಜಿ ಸದಸ್ಯ ಅಬ್ದೂಲ್ ಗಫೂರ್, ಸಮೀವುಲ್ಲಾ, ಕೊತ್ತನೂರು ಜಗದೀಶ್, ಗ್ರಾಪಂ ಸದಸ್ಯ ದೇವರಾಜ್, ಕೊತ್ತನೂರು ಜ್ಞಾನೇಶ್ ಮತ್ತಿತರರು ಉಪಸ್ಥಿತರಿದ್ದರು.

Get real time updates directly on you device, subscribe now.

Leave A Reply

Your email address will not be published.

Don`t copy text!