ಯಲಹಂಕ ನಗರದ ಮಳೆ ಹಾನಿ ಪ್ರದೇಶಕ್ಕೆ ಕುಮಾರಸ್ವಾಮಿ ಭೇಟಿ

0

ಯಲಹಂಕ: ಇತ್ತೀಚೆಗೆ ಸುರಿದ ಭಾರಿ ಮಳೆಯಿಂದ ಹಾನಿಗೊಳಗಾಗಿ ಸಂಕಷ್ಟಕ್ಕೆ ಸಿಲುಕಿದ್ದ ಯಲಹಂಕದ ಕೇಂದ್ರೀಯ ವಿಹಾರ್ ಅಪಾಟ್ಮೆಂಟ್ ಮತ್ತು ಚಿಕ್ಕಬೆಟ್ಟಹಳ್ಳಿ ಗ್ರಾಮಕ್ಕೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಭೇಟಿ ನೀಡಿ ಪರಿಶೀಲಿಸಿ ಜನರ ಸಮಸ್ಯೆಗಳನ್ನು ಆಲಿಸಿದರು .

ಇದೇ ವೇಳೆ ಮಾತನಾಡಿದ ಅವರು ‘ರಾಜ್ಯ ಸರ್ಕಾರಕ್ಕೆ ಮಳೆಯಿಂದ ಹಾನಿಗೊಳಗಾದ ಜನರ ಸಮಸ್ಯೆಗಳನ್ನು ಆಲಿಸುವುದು ಬೇಕಾಗಿಲ್ಲ ಅವರಿಗೆ ಜನರ ಸಮಸ್ಯಗಿಂತ ಕಮಿಷನ್ ಕೆಲಸವೇ ಹೆಚ್ಚು ಮುಖ್ಯವಾಗಿದೆ. ಇತ್ತೀಚೆಗೆ ಹಗಲು ದರೋಡೆ ನೋಡಲಿಕ್ಕೆ ಚಂಬಲ್ ಕಣಿವೆಗೆ ಹೋಗಬೇಕಿಲ್ಲ ರಾಜ್ಯದಲ್ಲಿ ಅಧಿಕಾರ ನಡೆಸುತ್ತಿರುವ ಬಿಜೆಪಿ ಸರ್ಕಾರದ ಸಚಿವರು ಬೆಂಗಳೂರನ್ನೇ ಚಂಬಲ್ ಕಣಿವೆ ಮಾಡಿದ್ದಾರೆ.

ಬೆಂಗಳೂರು ನಗರದ ರಸ್ತೆಗಳ ತುಂಬೆಲ್ಲಾ ಗುಂಡಿಗಳೇ ತುಂಬಿವೆ. ಮೂಲಭೂತ ಸಮಸ್ಯೆಗಳ ಬಗ್ಗೆ ರಾಜ್ಯ ಸರ್ಕಾರಕ್ಕೆ ಪರಿವೆಯೇ ಇಲ್ಲ. ಮಳೆಹಾನಿಯಿಂದ ನಗರದ ಜನತೆ ಸಂಕಷ್ಟಕ್ಕೆ ಒಳಗಾಗಿದ್ದರೂ ಇದರ ಬಗ್ಗೆ ಸರ್ಕಾರದ ಸಚಿವರು ಇದರ ಗೋಜಿಗೆ ಹೋಗದೆ ಲೂಟಿಯಲ್ಲಿ ತೊಡಗಿದ್ದಾರೆ.

ಚಿಕ್ಕಬೆಟ್ಟಹಳ್ಳಿಯಲ್ಲಿ ಇತ್ತೀಚಿಗೆ ಸುರಿದ ಮಳೆಯಿಂದ ಚರಂಡಿ ನೀರು ಮನೆಗಳಿಗೆ ನುಗ್ಗಿ ದೊಡ್ಡ ಆವಾಂತರವೇ ಸೃಷ್ಟಿಯಾಗಿದೆ, ಆದರೆ ಇಲ್ಲಿನ ಅಲ್ಪಸಂಖ್ಯಾತ ಸಮುದಾಯದ ಜನತೆ ತಮ್ಮ ಪಕ್ಷಕ್ಕೆ ಮತ ಹಾಕುವುದಿಲ್ಲವೆಂಬ ಏಕೈಕ ಕಾರಣಕ್ಕೆ ಇಲ್ಲಿಗೆ ಯಾವ ಸಚಿವರು, ಜನಪ್ರತಿನಿಧಿಗಳು ಭೇಟಿ ನೀಡುವ ಸಾಮಾನ್ಯ ಸೌಜನ್ಯತೆಯನ್ನೂ ಸಹ ತೋರಿಲ್ಲ, ಚುನಾವಣೆಯ ವೇಳೆ ಮಾತ್ರ ರಾಜಕಾರಣ ಮಾಡಬೇಕು, ಚುನಾವಣೆ ಮುಗಿದ ಬಳಿಕ ಎಲ್ಲರೂ ಸಹ ನಮ್ಮವರೇ ಎಂಬ ಭಾವನೆಯಿಂದ ಆಡಳಿತ ಮಾಡಬೇಕು, ಆದರೆ ತಮ್ಮ ಪಕ್ಷಕ್ಕೆ ಒಂದು ಸಮುದಾಯದ ಜನ ಮತ ಹಾಕುವುದಿಲ್ಲವೆಂಬ ಕಾರಣಕ್ಕಾಗಿ ಅವರಿರುವ ಇಡೀ ಪ್ರದೇಶವನ್ನೇ ನಿರ್ಲಕ್ಷ್ಯ ದೃಷ್ಟಿಯಿಂದ ನೋಡುವುದು ಎಷ್ಟರಮಟ್ಟಿಗೆ ಸರಿ, ಸಮಸ್ಯೆಗಳ ವಿಷಯದಲ್ಲಿ ಸಾಮುದಾಯಿಕ ಪ್ರತ್ಯೇಕತೆಯ ದೃಷ್ಟಿಯಿಂದ ನೋಡುವುದು ಸರಿಯಾದ ಆಡಳಿತ ಕ್ರಮವಲ್ಲ. ಸರ್ಕಾರ ಎಲ್ಲರನ್ನೂ ಸಹ ಸಮಾನ ದೃಷ್ಟಿಕೋನದಿಂದ ನೋಡಬೇಕೆ ಹೊರತು ಪ್ರತ್ಯೇಕ ದೃಷ್ಟಿಯಿಂದ ನೋಡುವುದು ತಪ್ಪಾದ ಕ್ರಮ.

ಯಲಹಂಕದ ಕೋಗಿಲು ವೃತ್ತದ ಬಳಿಯಿರುವ ಕೇಂದ್ರೀಯ ವಿಹಾರ್ ಅಪಾರ್ಟ್‌ಮೆಂಟ್‌ಗೆ ಭೇಟಿ ನೀಡಿ, ಅಲ್ಲಿನ ನಿವಾಸಿಗಳ ಅಹವಾಲುಗಳನ್ನು ಆಲಿಸಿದ್ದೇವೆ, ಸರ್ಕಾರವಾಗಲಿ, ಅಧಿಕಾರಿಗಳಾಗಲಿ ಮಳೆಯಿಂದ ಹಾನಿಗೊಳಗಾದ ಜನರ ಸಮಸ್ಯೆಗಳನ್ನು ಆಲಿಸಿಲ್ಲ, ಇಂತಹ ಸಂದಿಗ್ಧತೆಯ ಸಂದರ್ಭದಲ್ಲೂ ಸಹ ರಾಜಕಾರಣ ಮಾಡುವುದು ಸಮರ್ಪಕವಾದ ಕ್ರಮವಲ್ಲ. ಯಲಹಂಕ ನಗರದ ಭಾಗದಲ್ಲಿ ಮಳೆಯಿಂದ ಹಾನಿಗೊಳಗಾದ ಜನರ ಸಮಸ್ಯೆಯನ್ನು ಪರಿಹರಿಸಲು ಅಧಿಕಾರಿಗಳೊಂದಿಗೆ ಮಾತನಾಡಿ ಅಗತ್ಯ ಕ್ರಮ ಕೈಗೊಳ್ಳಲು ಸೂಚಿಸುವುದಾಗಿ ತಿಳಿಸಿದರು.

ಇದೇ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯರಾದ ಟಿ.ಎ.ಶರವಣ, ರಮೇಶ್, ಮಾಜಿ ವಿಧಾನ ಪರಿಷತ್ ಸದಸ್ಯ ಇ.ಕೃಷ್ನಪ್ಪ, ಯಲಹಂಕ ಕ್ಷೇತ್ರ ಜೆಡಿಎಸ್ ಅಧ್ಯಕ್ಷ ಕೃಷ್ಟಪ್ಪ, ಮಾಜಿ ಅಧ್ಯಕ್ಷರಾದ ಎಂ.ಕವಿತಾರೆಡ್ಡಿ, ಹನುಮಂತೇಗೌಡ, ಕ್ಷೇತ್ರ ಮಹಾಪ್ರಧಾನ ಕಾರ್ಯದರ್ಶಿ ಗಂಗಲಿಂಗಯ್ಯ, ಯುವಜನತಾ ರಾಜ್ಯ ಮಹಾ ಪ್ರಧಾನ ಕಾರ್ಯದರ್ಶಿ ಟಿ.ಎನ್.ಹರೀಶ್‌ಕುಮಾರ್ ಸೇರಿದಂತೆ ಇನ್ನಿತರರಿದ್ದರು.

Get real time updates directly on you device, subscribe now.

Leave A Reply

Your email address will not be published.

Don`t copy text!